ರಾಯಚೂರು: ಜಿಲ್ಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದ ರಾಸಾಯನಿಕ ಮಿಶ್ರಿತ ಕಳಬೆರಕೆ ಸೇಂದಿ ಮಾರಾಟ ದಂಧೆಯನ್ನು ಬಯಲಿಗೆಳೆಯುವಲ್ಲಿ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಅಕ್ರಮ ಅಡ್ಡೆಯ ಮೇಲೆ ಭರ್ಜರಿ ದಾಳಿ ನಡೆಸಿರುವ ಪೊಲೀಸರು ಭಾರಿ ಪ್ರಮಾಣದ ವಿಷಕಾರಿ ಸೇಂದಿಯನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಳಬೆರಕೆ ಸೇಂದಿ ಮಾರಾಟ ಮಾಡುತ್ತಿದ್ದ ಪರಶುರಾಮ (25) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆರೋಪಿಯನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ನಗರದ ಹೊರವಲಯದ ಸ್ನೇಹಾರೆಡ್ಡಿ ಡಾಬಾದ ಹಿಂಭಾಗದಲ್ಲಿ ಸಾರ್ವಜನಿಕರಿಗೆ ಮಾರಕವಾಗಬಲ್ಲ ರಾಸಾಯನಿಕಗಳನ್ನು ಮಿಶ್ರಣ ಮಾಡಿ ಕಳಬೆರಕೆ ಸೇಂದಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಗ್ರಾಮೀಣ ಪೊಲೀಸರ ತಂಡ ಸ್ಥಳಕ್ಕೆ ದಾಳಿ ನಡೆಸಿದಾಗ ಅಕ್ರಮ ದಂಧೆ ಜರುಗುತ್ತಿರುವುದು ಪತ್ತೆಯಾಗಿದೆ. ದಾಳಿಯ ವೇಳೆ ಸ್ಥಳದಲ್ಲಿದ್ದ 40 ಲೀಟರ್ ರಾಸಾಯನಿಕ ಮಿಶ್ರಿತ ಕಳಬೆರಕೆ ಸೇಂದಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಬಂಧಿತ ಆರೋಪಿ ಪರಶುರಾಮ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 275, 286 ಹಾಗೂ ಕರ್ನಾಟಕ ಅಬಕಾರಿ (KE) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗಂಭೀರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸಾರ್ವಜನಿಕರ ಪ್ರಾಣಕ್ಕೆ ಕುತ್ತು ತರುವ ಇಂತಹ ಅಕ್ರಮ ಹಾಗೂ ನಕಲಿ ಮಾದಕ ದ್ರವ್ಯಗಳ ಮಾರಾಟ ಜಾಲಗಳ ವಿರುದ್ಧ ಮುಂದಿನ ದಿನಗಳಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.